ಶವಾಗಾರದ ಬಾಗಿಲು ನಿಧಾನ
ತೆರೆದಿದೆ
ನಾ ತಲೆ ಎತ್ತಿ ನೋಡಿದೆ
ಬೇಡವೆಂದು ಬಚ್ಚಿಟ್ಟ ಕೀಲಿ ಕೈ
ಹುಡುಕುತ್ತಿದ್ದೆ
ನೋಡಿದರೆ ಬೀಗವದು ತಂತಾನೇ ಮುರಿದಿದೆ
ನಿರಾಕರಿಸುತ್ತಾ ತೆರೆದ ಬಾಗಿಲ ಆಹ್ವಾನವ
ಒಂದು ಹೆಜ್ಜೆ ಹಿಂದೆ ಕಿತ್ತಿಟ್ಟರೆ
ಪೌರುಷದ ಸಹಜ ಅಹಂ ಹಿಂದಿಂದ ನೂಕಿರಲು
ನನಗೇ ತಿಳಿಯದಂತೆ ನಾ ಒಳ ನಡೆದೆ
ಮಬ್ಬುಗತ್ತಲು ಸತ್ತವರ ಸುತ್ತಲೂ
ಹಳೆಯ ರಕ್ತದ ಘಮಲು ವಾಸನೆ
ಮನ ಕಲಕುವ ಮೌನದ ಅಳಲು
ಕೊನೆಯ ಭಾವನೆಯ ಹಿಡಿದಿಟ್ಟ ಮುಖಗಳು ...
ಮೇಲ್ಛಾವಣಿಯೆಡೆಗೆ ಶವಗಳ ವಿಶೇಷ ಒಲವು
ಪರಸ್ಪರ ಮಾತನಾಡಲಾಗದಿರಲು
ನಗುಮೊಗದ ಶವಗಳಿಗೆ ಜೀವ ತುಂಬುವಾಸೆ ಆದರೆ ...
ನಗುವಾಗ ಸತ್ತಿರ ಬಹುದೋ ನಗುತ್ತಾ ಸತ್ತಿರಬಹುದೋ?
ರಕ್ತದ ಕಲೆಗಳು ನೂರು ಕಥೆ ಹೇಳಿವೆ
ಕಣ್ಣೆರ ಕಥೆಗಳಂತೆ ನಿರ್ದಿಷ್ಟವಲ್ಲ ಊಹಿಸಲು .
ಆಕ್ರಂದನಕೆ ಕಿವಿ ಕಳೆದುಕೊಂಡ ಶವಗಳು
ಸಂಸ್ಕಾರಕೆ ಕಾದು ಕುಳಿತ ಮಾಜಿಗಳು
ಹೊರ ಬಂದು ಹೊಸ ಬೀಗ ಜಡಿದೆ
ಅನಾಥ ಶವಗಳ ಸಂಸ್ಕಾರ ಕೊಲೆಪಾತಕರ ಕರ್ತವ್ಯ!
ನನ್ನ ನೆನಪುಗಳ ಶವಗಳಿಗೆ ನಾನೇ ಒಡೆಯ ಆದರೂ...
ಕರ್ತವ್ಯ ಮರೆತವರಿಗೆ ಕಾದಿರಿಸಿದೆ ಕೀಲಿ ಕೈಯ!