Saturday, February 27, 2016

ವಿಮುಖ



ಮುರುಕು ಮನದ ತಾರಕವ ತೊರೆದು
ಜೀವನದ ಹೊಸ ಉನ್ಮಾದಗಳ ಹಳಿದು
ಸೋಲಿನ ತೆಕ್ಕೆಗೆ ಗೋಗರೆದು ಕೈಮುಗಿದು
ಇದ್ದಿಲ ಬಿಳುಪ ಪ್ರಶ್ನಿಸಿ ಕೊನೆತುಟಿಯ ಮಂದಹಾಸ.

ಜಗದ ಜಡತನವ ನಿಂತಲೇ ಅನುಭವಿಸಿ
ತನ್ನೊಳಗೆ ತಾ ಅಡಗಿ ತಾನಿಲ್ಲದಂತಿರಲು
ಸಡಗರದ ಸದ್ದಿನಲೂ ಶೂನ್ಯ ಕಿವಿಗಡಚುತಾ
ಧೂಮದೊಡಗೂಡಿ ಕಣ್ಣನಾವರಿಸಿದ ಕೊನೆಯ ಮಂಪರು.

ನಿಂತ ನೀರಿನ ನೊರೆಯ ಸೆರೆಯಲಿ
ಹಿಡಿದು ಆತ್ಮವನು ಸಹಿಸಿ ಸೆಳೆವನು
ಅನತಿ ದೂರದ ಪಾತ ಮೊರೆತವ ನೆನೆದು
ಮತ್ತೆಮರೆವ  ಸಹಜಾಭಿನಯಕೆ  ಕೊನೆಗುಳಿದ ಪಾರಿತೋಷ.