Sunday, July 21, 2019

ಶೂನ್ಯ ಸಂಜೆಗಳು ...

ಹೀಗೆ ಏತಕೋ ಸೋಲಬೇಕೆನಿಸಿತು
ಏರುನದಿಯ ಜೋರಿಗೆ ಅನುವಾಗಿ
ಕಾಣದ ತೀರಕೇತಕೆ ವೃಥಾ ಮೊರೆ
ವೈರಾಗ್ಯಕಲ್ಲ, ಸೋಲೇ ಸುಲಭ ಎಂದೆನಿಸಿ
ಒಮ್ಮೆ ಬಿಗಿಯಾಗಿ ಕಣ್ಮುಚ್ಚಿದರಾಯಿತು ಅಷ್ಟೇ!

ಹಾರಿ ನೋಡು ಇನ್ನೊಮ್ಮೆ.. ಆಗದು
ರೆಕ್ಕೆ ಕಟ್ಟಿಲ್ಲ ನಿಜ ಕಾಲು ಕಟ್ಟಿದೆ
ಕಣ್ಣು ಕಟ್ಟಿಲ್ಲ ಖರೆ, ಆದರೂ ಸ್ವಲ್ಪ ಸುಳ್ಳಿದೆ
ನಗುತಾ ಒರಗಿ ನಿಂತಿದ್ದೊಂದೇ ನೆನಪಿದೆ
ನಿಂತು ನಿಂತು ಈಗ ನೆಲಕೆ ಬೇರು ಬಿಟ್ಟಿದೆ

ಕಾಡು ಹರಟೆಯ ನಡುವೆ ಆಗಾಗ ಕಡುಮೌನ
ಅರಿಯದೇ ಬರೆದ ಮುನ್ನುಡಿ... ಬರೀ ಮುನ್ನುಡಿಯಷ್ಟೇ
ಸಣ್ಣ ವಿಷಯಾಂತರಕೇ ಕಾಯುತಿದ್ದ ಮರೆವು
ಅಣುಕಿಸಿ ಕುಹಕವಾಡುವ ನೆನಪುಗಳು
ಮೊದಲಿನದು ಭ್ರಮೆ ಈಗಿನದು ಬರಿಯ ಗೋಜಲು !

ಕಣ್ಣು ಕೂರಿಸುವ ಜಡ ಯೋಚನೆಗಳ
ಒಳಾರ್ಥವಿರದ ಆಲಸ್ಯ ಅನುವಾದಕೆ
ಹಂಬಲಿಸದೇ ಸಿಕ್ಕಂತಿದೆ ನೀರವತೆಯ ದಕ್ಷಿಣೆ.
ಮುಸ್ಸಂಜೆಯಲಿ ಮುಂಬಾಗಿಲು ಪೂರ್ತಿ ತೆರೆದಿಟ್ಟು.
ಮತ್ತೆ ಕಾಯುತಿದೆ ಮನ ಶೂನ್ಯ ಸಂಜೆಗಳಿಗೆ