Friday, July 20, 2012

ನಾಕದಿ ನರಕ ನರ್ತನ ...


ನಾಕದಿ ನರಕ ನರ್ತನ



ಕಪ್ಪು ಹಕ್ಕಿ ಕೇಳಿ ಪಡೆದಿದೆ ಬಿಳಿಯ ರೆಕ್ಕೆಯಾ 
ಹಾರಲಾಗದೆ ಮುದುಡಿ ಸೇರಿದೆ ಜಗುಲಿ ಮೂಲೆಯ !
ಬಿಳಿಯ ರೆಕ್ಕೆಯು ಮರೆಮಾಚುತಾ ಕಪ್ಪು ದೇಹವ 
ಅವಿತು ಕುಳಿತಿದೆ ಕಪ್ಪು ಛಾಯೆಬಿಳಿಯು ಭ್ರಮೆಯೆನುತಾ!

ಅರಿವನರಿಯದ ಕಪ್ಪು ದೇಹ ತನ್ನತನವ ತೊರೆಯಲು 
ಬಿಳಿಯ ತೋರ್ಪಡಿಕೆಗೆ ಬಿಳುಪಿನೆದುರು ಕಪ್ಪು ತಲೆಬಾಗಲು 
ಕಪ್ಪು ಮೂಲೆಯ, ಚಂದ ಬಿಳಿಯು ಕಳೆಗಟ್ಟಿದೆ.
ಬಿಳಿಯು ಕಪ್ಪನು ತಬ್ಬಲೆತ್ನಿಸಿ,ತಬ್ಬಿಯೂ ದೂರತಳ್ಳಿದೆ!


ಬಿಳಿ ರೆಕ್ಕೆಯ ಭಾರಕೆ ಕಪ್ಪು ಕಾಯವು ಸೋತಿದೆ
ತೇಲಿಸದೇ ಬಿಳಿ ಕಪ್ಪನು, ಹಿಡಿದು ಏಕೆ  ಕೂರಿಸಿದೆ
ಮುದುಡಿ ರೆಕ್ಕೆಯು ಹರಡದಿರಲು ಕಪ್ಪು ಒಳಗೇ ಬೀಗಿದೆ
ಬಿಳಿಗೆ ಕಪ್ಪ ದೃಷ್ಟಿ ತಗಲಿಯೂ   ಕಪ್ಪು ಮಾಸಿ ಬಳಲಿದೆ

ಕಪ್ಪು ಬಿಳಿಯ ಕಪ್ಪಾಗಿಸುವಂತೆ 
ಬಿಳಿಯು ಕಪ್ಪನು ಬಿಳಿಯಾಗಿಸುವುದೇ?
ಬಿಳಿಗೆ ಕಪ್ಪು ಸಹ್ಯವಾಗುವುದುoಟೇ !
ಬಿಳಿಯು ಕಪ್ಪ ಹೊಟ್ಟೆ ತುಂಬುವುದುoಟೇ !


ಕತ್ತಲು ನುಂಗುತಿರೆ  ಬೆಳಕನು 
ಬಣ್ಣವದು ಕಪ್ಪಾದರೇನು ಬಿಳಿಯಾದರೇನು ?
ಅಸ್ತಿತ್ವವಿಲ್ಲ ಎರಡಕೂ , ಬೆಲೆಯಿಲ್ಲ ಎರಡಕೂ !
ಬೆಳಕು ಚೆಲ್ಲದಿರೆ ಬಣ್ಣವ, ಬದುಕಿಲ್ಲ ಯಾವ ಬಣ್ಣಕೂ. 

ಕಪ್ಪು ನರಕಕೆ ಬಿಳಿಯ ನಾಕಕೆ ಏಕೆ ಇಂಥ ಸಾಮ್ಯತೆ.
ನಡುವೆ ಇರುವುದು ಬರಿ ಗಾಜಪರದೆಯ ಭಿನ್ನತೆ !
ಕಪ್ಪು ನರಕಕೆ ಬಿಳಿಯ ಲೇಪನ! 
ಬಿಳಿಯ ನಾಕದಿ ನರಕ ನರ್ತನ!

No comments:

Post a Comment