ಕೊನೆಯ ಸಾಲೇ ಮೊದಲು ಹೊಳೆದಿರಲು ಹೇಗೆ ಬರೆಯಲಿ ಮುಂದೆ
ತೋಚಿದ್ದು ಗೀಚಿ, ಅದಕರ್ಥ ಹುಡುಕಲು ಹೋಗಿ ಬರೆದಿದ್ದು ಹೊಡೆದು
ಈಗ ಎಲ್ಲವೂ ಅವ್ಯಕ್ತ ... ಗೋಜಲು ಅಲ್ಲಲ್ಲಿ ವಿಷಯಾಂತರ
ತಿರುಗು ಮುರುಗಿಸಿ ಓದಿದರೂ ವ್ಯತ್ಯಾಸ ಬಹಳವೇನಿಲ್ಲ
ಮುಗ್ಗರಿಸಿ ಬಿದ್ದಂತೆ ನಿಂತ ನೆಲದಲ್ಲೇ ಹಿಂದೆ ಏನಿಲ್ಲ... ಮುಂದೆ ?
ಮತ್ತದೇ ಅರ್ಥ ಕೊಡುವ ಹಲವು ಸಾಲುಗಳು
ಆದರೂ ಒಂದಕೊಂದು ಸಂಬಂಧವಿಲ್ಲ ಅದರ ಮುಲಾಜೂ ಇಲ್ಲ
ಅಲ್ಲಲ್ಲಿ ಗೀಟು ಸರಿಪಡಿಸಿದ ಧಾಟಿ... ಏನೋ ಸರಿ ಹೊಂದುತಿಲ್ಲ
ಪಾಚಿ ಕಟ್ಟಿರಬಹುದು ನಿಜ ಮನಸಿಗಲ್ಲ... ಆಲೋಚನೆಗೆ
ಬಿಡದೆ ಸುರಿದ ಬೇಸರದ ಮಳೆಗೆ... ಸುಳ್ಳು ನೆಮ್ಮದಿಗೆ
ಯಾರೂ ಬೇಡಿರಲಿಲ್ಲ... ಬಯಸಿರಬಹುದೇನೋ ಒಳಗೊಳಗೇ
ಅತಿಯೇ ಆಯಿತೀಗ, ತೀರಾ ಇಷ್ಟೂ ಬೇಕಿರಲಿಲ್ಲ !
ಹೇಗೆ ಬರೆದರೂ ಶಬ್ದಾರ್ಥವ ಮೀರಿ ಅರ್ಥ ಮೂಡುತಿಲ್ಲ
ಆ ಸಾಲು ಇಲ್ಲಿ ಈ ಸಾಲು ಅಲ್ಲಿ... ಏಹ್ !
ಬಿಡದೆ ಇಷ್ಟು ಬರೆದರೂ ಅನಿಸಿದ್ದು ಇಳಿದಿಲ್ಲ
ಬಹುಶಃ ಬರೆಯಲು ಕೂತ ಘಳಿಗೆಯೇ ಸರಿ ಇಲ್ಲ !
No comments:
Post a Comment