ದಣಪೆ ದಾಟುವ ಸಮಯ ಅಡ್ಡಡ್ಡ ನಡೆಯುವವ
ವ್ಯಾಯಾಮ ಶಾಲೆಗೆ ಚಿತ್ರಪಟವಾದವ
ಊರ ಬೇಣಕೆ ,ಕಳೆ –ಕಳ್ಳಿ ಗಿಡಗಳಿಗೆ
ಕುಡಿದ ನೀರೆರೆಯುವವ
ಮುಂಜಾನೆ ವೇಳೆ ಸಾವಯವ ಕೃಷಿ ಅಂದವ !
ಬಣ್ಣ ಬಣ್ಣದ ಚಣ್ಣ ನಿತ್ಯ ಒಣ ಹಾಕುವವ
ಗುಟ್ಟಕ್ಕೆ ಮುಖ ಹೋಲುವ
ತಮ್ಮನ ತಮಾಷೆ ಮಾಡುವವ
ಪ್ರತಿನಿತ್ಯ ಪುಂಡಾಟ ಬೇಕೆಂದು
ದೊಸ್ತರೊಡಗೂಡಿ ಗಾಡಿಯ ಗಾಳಿ ತೆಗೆದವ
ಶಾಲೆ ಮುಗಿದರೆ ನೇರ ದೇವಸ್ಥಾನ ಎಂದವ
ಭಕ್ತಿಯಿಂದಲೇ ಶಿಲ್ಪಕಲೆ ಸವಿದವ
ಸೈಕಲ್ಗೆ ಡೈನಮೊ ಹಾಕಿ ಊರಾಚೆ
'ಆಟ' ನೋಡಲು ರವಿವಾರಕೆ ಕಾದವ
ಹಿಂಬದಿ ಸವೆದ ಪಾರಗೊನು ಚಪ್ಪಲಿಯವ!
ಇಸ್ಪೀಟಾಟಕೆ ನಿತ್ಯ ಹಣ ಕೂಡಿದವ
ಮಾಸ್ತರರ ಚಿತ್ರ ಗೋಡೆಯಲಿ ಕೊರೆದವ
ರಾತ್ರಿ ಆಟಕೆ ಹೋಗಲು ಕಂಬಳಿ ಕೊಂಡವ!
ಅಪ್ಪನ ಜೇಬಿಂದ ಎಂಟಾಣೆ ದಿನಾ ಮಾಯ
ತಿಳಿಯದೆ ಬಂದಿತ್ತು ಹುಡುಗನಿಗೆ ಪ್ರಾಯ
ಹಣ್ಣು ಹಣ್ಣಾದ ಮುದುಕನೀಗ
ಹಣ್ಣು ತಿಂದೇ ಬದುಕವನೀಗ.. ಆದರೇನಂತೆ ?
ಹಲ್ಲು ಕಟ್ಟಿಸಿಯೂ ಕವಳ ಜಗಿಯುವಾಗ !
ಮುಪ್ಪಲ್ಲಿ ಮರುಮದುವೆ ಆಗುವೆನೆಂದು
ಮಡದಿಗೆ ಬೆದರಿಸಿ ಕಚ್ಚೆ ಉಟ್ಟು ನಿಂತನೀಗ!
No comments:
Post a Comment