ನನ್ನ ಬೆನ್ನು ನಂದಲ್ಲ !
ಇರುವಿಕೆಯ ಅರಿವಿರುವವರೆಗೆ
ಕುಳಿತಲ್ಲಿಂದ ಕದಲದೇ ಮತ್ತೂ ಕೇಳುವ
ಹಂಬಲದ ಹಲಗೆಯೇರಿ ಕಣ್ಮುಚ್ಚಿ ಜೀಕುತಾ
ತಾನಾಗಿ ನಿಲ್ಲದೇ ಸುತ್ತಲೂ ನೋಡಿ
ಮತ್ತೆ ಮೈಮರೆಯುವ ಸಮಯ,
ಆಂತರ್ಯವೇನು ಕಸವಲ್ಲ, ಆದರೂ ನೋಡಲದೇ ನಿಜ!
ಬಿಟ್ಟ ಹವ್ಯಾಸ ಕಟ್ಟ ಕಡೆಗೆ ಕೇಳಿದೆ
ಒಂದೇ ಒಂದು ಪ್ರಶ್ನೆಗೆ ಸಮಾಧಾನವ.
ಗಪ್ಪಾಗಿ ಗೋಜಲು ಕೆದಕಲು ಸ್ಪಷ್ಟ ಚಿತ್ರಣ
ಹಿಂದೆ ನಡೆದದ್ದು ಸುಳ್ಳಲ್ಲದಿದ್ದರೂ ಕ್ಷುಲ್ಲಕ.
ಬಿತ್ತಿದ್ದು ಭಿಕ್ಷವನ್ನಲ್ಲ, ಇಂದಿಗದೇ ದಿಟ.
ಸತ್ತ ಸಸಿಗೆ ನೀರೆರೆದದ್ದು, ಸೋಜಿಗದ ಸತತ ವೃತ.
ನಿನ್ನೆ ನಾಳೆಗಳಿಗೆ ಜಾತ ಪ್ರಶ್ನೆಗಳಿಗೆ
ಅಂತರವಿದೆ ನೂಲು ಮಾತ್ರ ತೂರುವಷ್ಟು.
ಇರುಳಿಗಿಲ್ಲ ಬೆಳಕಿನ ಮಮಕಾರ ಆದರೆ,
ದೂರದ ಕಿಂಡಿಯೊಡನೆ ಸುಮ್ಮನೊಂದು ಸಂವಾದ.
ಮೂದಲಿಸಲಾಗದು, ಭ್ರಮೆಯೂ ಬದುಕುವುದು ಸುಳ್ಳಲ್ಲ.
ಬಲವಂತಕ್ಕೆ ಬರುವ ಬೆನ್ನು,ನನ್ನದೇ ಆದರೆ ನಂದಲ್ಲ!
No comments:
Post a Comment